ಪ್ರಾತಿಶಾಖ್ಯಗಳು

ವೇದಗಳ ಪ್ರತಿಯೊಂದು ಶಾಖೆಯವರು ವೈದಿಕ ಶಬ್ದಗಳನ್ನು ಉಚ್ಚರಿಸುವಾಗ ಋಷಿಗಳ ಉಚ್ಚಾರಕ್ಕೂ ತಮ್ಮ ಉಚ್ಚಾರಕ್ಕೂ ಇರುವ ವ್ಯತ್ಯಾಸಗಳನ್ನು ನಿರೂಪಿಸುವ ನಿಯಮಗಳನ್ನೊಳಗೊಂಡ ಗ್ರಂಥಗಳು. ಇವು ವೈದಿಕ ಮಂತ್ರಾಕ್ಷರಗಳ ಉತ್ಪತ್ತಿಸ್ಥಾನವನ್ನೂ ಉಚ್ಚಾರವನ್ನೂ ಮೂಲ ಮಂತ್ರದ್ರಷ್ಟಾರರ ಕಾಲದಲ್ಲಿದ್ದಂತೆಯೇ ಉಳಿಸಿಕೊಳ್ಳಲು ಯತ್ನಿಸಿವೆ. ಅದಕ್ಕಾಗಿ ಸಂಗ್ರಹಿಸಿದ ನಿಯಮಗಳೇ ಮುಂದೆ ಅಕ್ಷರ, ವರ್ಣ, ಶಬ್ದಗಳ ಸ್ವರಶಾಸ್ತ್ರವಾಗಿ ವ್ಯಾಕರಣದ ಭಾಗವಾಯಿತು. ಹೀಗಾಗಲು ಬಹು ವರ್ಷಗಳು ಸಂದಿರಬಹುದು. ಬ್ರಾಹ್ಮಣಕಾಲದಲ್ಲಿ ವೇದಮಂತ್ರಗಳು ಮುಖೋದ್ಗತವಾಗಿದ್ದುವು. ಅಂದರೆ ಅವನ್ನು ಗುರುಗಳ ಮುಖದಿಂದ ಕಲಿಯಬೇಕಾಗುತ್ತಿತ್ತು. ಬರಬರುತ್ತ ಭಾಷೆ ಬೆಳೆದಂತೆ ಶಬ್ದಗಳ ಉಚ್ಚಾರದಲ್ಲಿ ಮತ್ತು ಅವುಗಳ ಅರ್ಥದಲ್ಲಿ ಬದಲಾವಣೆಯಾಗ ಹತ್ತಿತ್ತು. ಮೇಲಾಗಿ ಆರ್ಯರ ಜನಸಂಖ್ಯೆ ಬೆಳೆದಂತೆ ಅವರ ವಸತಿಗಳೂ ಕುಲಗಳೂ ಬೆಳೆದುವು. ಪ್ರತಿಯೊಂದು ಕುಲದಲ್ಲಿ ಶಾಖೆಗಳಾಗಿ, ಪ್ರತಿ ಶಾಖೆಯವರು ವೇದಗಳನ್ನು ಪ್ರತ್ಯೇಕವಾಗಿ ಪಠಿಸಹತ್ತಿದರು. ಆದುದರಿಂದ ಮಂತ್ರಗಳ ಉಚ್ಚಾರದಲ್ಲಿ, ಸ್ವರಾಘಾತದಲ್ಲಿ, ಶಾಖೆಗಳಲ್ಲೂ ವ್ಯತ್ಯಾಸವಾಗಹತ್ತಿತು. ಈ ವ್ಯತ್ಯಾಸವನ್ನು ದೂರಮಾಡಿ ಮಂತ್ರಗಳ ಮೂಲ ಉಚ್ಚಾರ ಸ್ವರಾಘಾತಗಳನ್ನು ಸರಿಯಾಗಿ ಕಾಪಾಡಿಕೊಂಡು ಬರಲು ಪ್ರಾತಿಶಾಖ್ಯಗಳು ಹುಟ್ಟಿದುವು. ವೇದಾಂಗ ವಾದ ಶಿಕ್ಷಾಶಾಸ್ತ್ರಕ್ಕೂ ಪ್ರಾತಿಶಾಖ್ಯಗಳಿಗೂ ನಿಕಟಸಂಬಂಧವಿದೆ. ಅವು ಒಂದಕ್ಕೊಂದು ಪೂರಕವಾಗಿವೆ.

ಪ್ರತಿಯೊಂದು ಸಂಹಿತೆಯ ಪಠಣ ಆ ಸಂಹಿತೆಗೆ ಸಂಬಂಧಿಸಿದ ಶಾಖೆಗಳಲ್ಲಿ ಪ್ರತ್ಯೇಕವಾಗಿ ನಡೆಯುತ್ತಿತ್ತು. ಅಂಥ ಶಾಖೆಗಳೆಲ್ಲ ಈಗ ಉಪಲಬ್ಧವಿಲ್ಲ. ಒಂದೆರಡೇ ದೊರೆಯುವುವು, ಋಗ್ವೇದ ಶಾಖೆಗಳಾದ ಬಾಷ್ಕಲ ಮತ್ತು ಶಾಕಲ ಶಾಖೆಗಳೆರಡಕ್ಕೂ ಒಂದೇ ಪ್ರಾತಿಶಾಖ್ಯ ಈಗ ಉಪಲಬ್ಧವಿದೆ. ಅದು ಶೌನಕನಿಂದ ರಚಿತವಾದುದು. ಶೌನಕ ಋಗ್ವೇದದ ಶೈಶಿರ ಶಾಖೆಗೆ ಸಂಬಂಧಿಸಿದವನಾದರೂ ಅವನ ಪ್ರಾತಿಶಾಖ್ಯ ಬಾಷ್ಕಲ ಮತ್ತು ಶಾಕಲ ಶಾಖೆಗಳರಡನ್ನೂ ಒಳಗೊಂಡಿದೆ. 

ಋಗ್ವೇದ ಪ್ರಾತಿಶಾಖ್ಯ ಪದ್ಯರೂಪದಲ್ಲಿದೆ. ಇದರಲ್ಲಿ ಆರಾರು ಪಟಲಗಳ ಮೂರುಕಾಂಡಗಳಿವೆ. ಒಟ್ಟು 103 ಕಾಂಡಿಕೆಗಳಿವೆ. ಯಾಸ್ಕನ ನಿರುಕ್ತದಲ್ಲೂ ಪಾಣಿನಿಯ ಅಷ್ಟಾಧ್ಯಾಯಿಯಲ್ಲೂ ಉಕ್ತರಾದ ಆಚಾರ್ಯರ ಕೆಲವು ಹೆಸರುಗಳೂ ಇದರಲ್ಲಿ ಬಂದಿವೆ. ಇದರ ಮೇಲೆ ಉವಟ ಭಾಷ್ಯ ಬರೆದಿದ್ದಾನೆ. ಕೃಷ್ಣ ಯಜುರ್ವೇದದ ಪ್ರಾತಿಶಾಖ್ಯವೊಂದು ಉಪಲಬ್ಧವಿದೆ. ಇದರಲ್ಲಿ ಸುಮಾರು ಆಚಾರ್ಯರ ಹೆಸರುಗಳಿವೆ. ಅವುಗಳಲ್ಲಿ ಆತ್ರೇಯ, ಕೌಂಡಿನ್ಯ, ಭಾರದ್ವಾಜ, ವಾಲ್ಮೀಕಿ, ಅಗ್ನಿವೇಶ್ಯ, ಅಗ್ನಿ, ವೇಶ್ಯಾಯನ, ಷೌಷ್ಕರ ಮೊದಲಾದವರು ಮುಖ್ಯರು. ಇದರ ಮೇಲೆ ತ್ರಿಭಾಷ್ಯ ರತ್ನವೆಂಬ ಒಂದು ಭಾಷ್ಯವಿದೆ. ಶುಕ್ಲ ಯಜುರ್ವೇದದ ಮಾಧ್ಯಂದಿನ ಶಾಖೆಯ ಪ್ರಾತಿಶಾಖ್ಯವೊಂದು ಉಪಲಬ್ಧವಿದೆ. ಅದನ್ನು ಕಾತ್ಯಾಯನ ರಚಿಸಿರುವನೆಂದು ಪ್ರತೀತಿ. ಇದರಲ್ಲಿ ಶಾಕಟಾಯನ, ಶಾಕಲ್ಯ ಮತ್ತು ಗಾಗ್ರ್ಯರೆಂಬ ವೈಯಾಕರಣಗಳ ಉಲ್ಲೇಖವಿದೆ. ಇವರನ್ನು ಯಾಸ್ಕನೂ ಪಾಣಿನಿಯೂ ಹೆಸರಿಸಿರುವರು. ಇವರಲ್ಲದೆ ಕಾಶ್ಯಪ, ದಾಲ್ಬ್ಯ, ಜಾತುಕರ್ಣ, ಶಾನಕ, ಔಪಶಿವಿ, ಕಾಣ್ವ ಮೊದಲಾದವರ ಹೆಸರೂ ಬಂದಿವೆ. ಸಂಹಿತೆಗಳಲ್ಲಿರುವ ಭಾಷೆಗೆ ಅನ್ವಧ್ಯಾಯವೆಂದೂ ರೂಢಿಯಲ್ಲಿರುವುದಕ್ಕೆ ಭಾಷಾ ಎಂದೂ ಯಾಸ್ಕಾಚಾರ್ಯ ವಿಂಗಡಿಸಿರುವಂತೆ ಈ ಪ್ರಾತಿಶಾಖ್ಯದಲ್ಲಿ ಪ್ರಾಚೀನ ಭಾಷೆಗೂ ಆಗ ರೂಢಿಯಲ್ಲಿದ್ದ ಭಾಷೆಗೂ ಹೆಸರನ್ನು ಹೇಳಲಾಗಿದೆ. ಇದರ ಮೊದಲಿನ ಅಧ್ಯಾಯದಲ್ಲಿ ಸಂಜ್ಞಾ ಮತ್ತು ಪರಿಭಾಷೆಗಳನ್ನು ವಿವರಿಸಲಾಗಿದೆ, ಇವುಗಳಲ್ಲಿಯ ಪಾರಿಭಾಷಿಕ ಶಬ್ದಗಳು ಪಾಣಿನಿಯ ವ್ಯಾಕರಣದ ತಿಙï, ಕೃತ್, ತದ್ಧಿತ, ಉಪಧಾ ಮೊದಲಾದುವನ್ನು ಹೋಲುವುವು. ಎರಡನೆಯ ಅಧ್ಯಾಯದಲ್ಲಿ ಸ್ವರಾಘಾತ, ಮೂರನೆ ನಾಲ್ಕನೆ ಐದನೇ ಅಧ್ಯಾಯಗಳಲ್ಲಿ ಸಂಸ್ಕಾರ (ಎಂದರೆ ಲೋಪ, ವೃದ್ಧಿ, ಗುಣ, ಮೊದಲಾದುವನ್ನು ಸ್ವರನಿಯಮಗಳಿಗನುಸರಿಸಿ), ಆರನೆಯದರಲ್ಲಿ ವಾಕ್ಯಗಳಲ್ಲಿರುವ ಕ್ರಿಯಾಪದಗಳ ಸ್ವರಾಘಾತ, ಏಳನೆ ಎಂಟನೆಯ ಅಧ್ಯಾಯಗಳಲ್ಲಿ ಸ್ವರವ್ಯಂಜನಗಳ ಸಂಖ್ಯೆ, ಸ್ವಾಧ್ಯಾಯದ ನಿಯಮಗಳು, ಶಬ್ದ ವಿಭಜನೆ ಮೊದಲಾದುವನ್ನು ವಿವರಿಸಲಾಗಿದೆ. ಇದರ ಮೇಲೆ ಉವಟನ ಉತ್ತಮ ವ್ಯಾಖ್ಯೆಯಿದೆ.

	ಅಥರ್ವವೇದದ ಪ್ರಾತಿಶಾಖ್ಯಕ್ಕೆ ಶೌನಕೀಯ ಚತುರಾಧ್ಯಾಯಿಕಾ ಎಂದೂ ಹೆಸರು. ಇದು ಅಥರ್ವವೇದದ ಚರಣವಾದ ಶೌನಕೀಯರ ಪ್ರಾತಿಶಾಖ್ಯ. ಇದರಲ್ಲಿ ವ್ಯಾಕರಣ ವಿಷಯ ಅಲ್ಲಲ್ಲಿ ಹೆಚ್ಚಾಗಿ ಬರುವುದು. ಶಾಕಟಾಯನ ಮೊದಲಾದ ವೈಯಾಕರಣಿಗಳ ಹೆಸರುಗಳೂ ಬಂದಿವೆ. ಈಚೆಗೆ ಅಥರ್ವ ಪ್ರಾತಿಶಾಖ್ಯವೆಂಬ ಮತ್ತೊಂದು ಗ್ರಂಥವೂ ಉಪಲಬ್ಧವಾಗಿದೆ. 

	ಸಾಮವೇದದ ಪ್ರಾತಿಶಾಖ್ಯ ದೊರೆತಿಲ್ಲ. ತೈತ್ತಿರೀಯ ಪ್ರಾತಿಶಾಖ್ಯವನ್ನೊಳಗೊಂಡ ಒಂದು ಪ್ರತಿ ದೊರೆತಿದೆಯೆಂದು ಮ್ಯಾಕ್ಸ್‍ಮ್ಯೂಲರ್ ಹೇಳುತ್ತಾರೆ. ಅದಕ್ಕೆ ಸಾಮತಂತ್ರವೆಂದು ಹೆಸರು. ಉಳಿದ ಪ್ರಾತಿಶಾಖ್ಯಗಳಲ್ಲಿರುವ ವಿಷಯವನ್ನೇ ಅದೂ ಪ್ರತಿಪಾದಿಸುವುದು.
(ಎಸ್.ಸಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ